ಕೇವಿ

ರೋಡೆನ್ಷಿಯ ವರ್ಗದಲ್ಲಿನ ಕವೈಯಿಡೀ ಕುಟುಂಬಕ್ಕೆ ಸೇರಿದ ಹಲವಾರು ಪ್ರಾಣಿಗಳಿಗಿರುವ ಸಾಮಾನ್ಯ ಹೆಸರು. ಇವುಗಳಲ್ಲಿ ಮುಖ್ಯವಾದವು ಪಟಗೋನಿಯದ ಕೇವಿ ಅಥವಾ ಮೊಲ (ಡಾಲಿಕೋಟಿಸ್ ಪಟಗೋನ), ಗಿನಿ ಹಂದಿ(ಕೇವಿಯ ಜಾತಿ) ಮತ್ತು ಮೋಕೋ (ಕೆರಾಡಾನ್ ಜಾತಿ).

ಬಿರುಸಾದ ಮೈಗೂದಲು, ಚೆನ್ನಾಗಿ ಬೆಳೆದ ಕಿವಿಗಳು, ಮುಂಗಾಲಿನಲ್ಲಿ 4 ಮತ್ತು ಹಿಂಗಾಲಿನಲ್ಲಿ 3 ಬೆರಳುಗಳು. ಬಾಲವಿಲ್ಲದಿರುವುದು ಇವುಗಳ ಮುಖ್ಯ ಲಕ್ಷಣಗಳು. ಪಟಗೋನಿಯದ ಕೇವಿ ಅರ್ಜೆಂಟೀನ, ಪಟಗೋನಿಯ ದೇಶಗಳ ಕುರುಚಲು ಕಾಡುಗಳಲ್ಲಿ ವಾಸಿಸುತ್ತದೆ. ಇದರ ಉದ್ದ ಸುಮಾರು 69-75 ಸೆಂಮೀ. ತೂಕ ಸುಮಾರು 15 ಕೆಜಿ. ದೇಹದ ಬಣ್ಣ ಬೂದು ಮಿಶ್ರಿತ ಕಂದು. ನೆಲವನ್ನು ತೋಡಿ ನಿರ್ಮಿಸಿಕೊಂಡ ಬಿಲಗಳಲ್ಲಿ ವಾಸಿಸುತ್ತದೆ. ಇದು ಶಾಕಾಹಾರಿ, ಇದರ ಚಟುವಟಿಕೆ ಹಗಲಿನಲ್ಲಿ, ಮೊಲಗಳಂತೆ ಕುಪ್ಪಳಿಸುತ್ತ ಓಡಾಡುತ್ತದೆ.
ಪಟಗೋನಿಯದ ಕೇವಿ ಒಂದು ಸಲಕ್ಕೆ 2-5 ಮರಿಗಳನ್ನು ಈಯುತ್ತದೆ. ಗಿನಿಹಂದಿ (ನೋಡಿ- ಗಿನಿ-ಹಂದಿ) ಮತ್ತು ಮೋಕೋಗಳು ಪಟಗೋನಿಯದ ಕೇವಿಯನ್ನು ಬಹುವಾಗಿ ಹೋಲುವುದಾದರೂ ಅವಕ್ಕೂ ಇವಕ್ಕೂ ಅನೇಕ ವ್ಯತ್ಯಾಸಗಳುಂಟು.
												
(ವಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ